ಎಡ್‍ಜರ್‍ಟನ್, ಫ್ರಾಂಕ್‍ಲಿನ್

	1885-1963. ಅಮೆರಿಕೆಯ ಸುಪ್ರಸಿದ್ಧ ಸಂಸ್ಕøತಜ್ಞರಲ್ಲಿ ಒಬ್ಬ. ಮ್ಯೂನಿಕ್ ಮತ್ತು ಚೀನಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ 1909ರಲ್ಲಿ ಸಂಶೋಧನ ಪ್ರಶಸ್ತಿಯನ್ನು ಗಳಿಸಿದ. ಜಾನ್ ಹಾಪ್‍ಕಿನ್ಸ್ ಫೆಲೊ ಆಗಿ ಮುಂದೆ ಅಲ್ಲಿಯೇ ಉಪಾಧ್ಯಾಯವೃತ್ತಿಯನ್ನು ಅವಲಂಬಿಸಿದ. 1909 ರಿಂದ 1915 ರವರೆಗೆ ಸಂಸ್ಕøತ ಮತ್ತು ತುಲನಾತ್ಮಕ ಭಾಷಾಶಾಸ್ತ್ರದಲ್ಲಿ ಜಾನ್‍ಸ್ಟನ್ ವಿದ್ವಾಂಸವೃತ್ತಿಯನ್ನು ಗಳಿಸಿ, ಮುಂದೆ 1925ರವರೆಗೆ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತ ಉಪಪ್ರಾಧ್ಯಾಪಕನಾಗಿದ್ದು ಅಲ್ಲಿಯೇ ಪ್ರಾಧ್ಯಾಪಕನಾದ. ಈ ವೇಳೆಗೆ ಪ್ರಕಾಂಡಪಂಡಿತನೆಂದು ಖ್ಯಾತ ಗಳಿಸಿದ್ದ ಎಡ್‍ಜರ್‍ಟನ್ ಸಂಶೋಧಿತ ಪಂಚತಂತ್ರವನ್ನು ಎರಡು ಭಾಗಗಳಲ್ಲೂ ಸಂಪಾದಿತ ಶ್ರೀಮದ್‍ಭಗವದ್‍ಗೀತೆಯನ್ನೂ ಪ್ರಕಟಿಸಿದ. ಬತ್ತೀಸಪುತ್ಥಳೀ ಕಥೆಗಳೆಂದು ಪ್ರಸಿದ್ಧವಾಗಿರುವ ಶಕಪುರುಷ ವಿಕ್ರಮಾದಿತ್ಯನ ಕಥಾಸಂಕಲನವೊಂದು 1925ರಲ್ಲಿ ಪ್ರಕಟವಾಯಿತು. ಈ ಮಧ್ಯೆ ಈತ ಭಾರತಕ್ಕೆ ಎರಡು ಬಾರಿ ಬಂದಿದ್ದ.

	1926 ರಿಂದ 1946ರವರೆಗೆ ಎರಡು ದಶಕಗಳ ಕಾಲ ಈತ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತ ಮತ್ತು ತುಲನಾತ್ಮಕ ಭಾಷಾಶಾಸ್ತ್ರದಲ್ಲಿ ಸ್ಯಾಲಿಸ್‍ಬರಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. 1929ರಲ್ಲಿ ಪ್ರಕಾಶಗೊಂಡ ಮೀಮಾಂಸನ್ಯಾಯಪ್ರಕಾಶವೂ 1931ರಲ್ಲಿ ಪ್ರಕಟಿತವಾದ ಭಾರತೀಯ ಹಸ್ತಿಸಾಹಿತ್ಯ (ಎಲಿಫೆಂಟ್ ಲೋರ್ ಆಪ್ ದಿ ಹಿಂದೂಸ್) ಎಂಬ ಗ್ರಂಥವೂ ಎಂ. ಬ್ಲೂಮ್‍ಫೀಲ್ಡ್, ಎಂ.ಬಿ.ಎಮೆನೋ ಇವರುಗಳೊಡನೆ 1930, 1932 ಮತ್ತು 1934ರಲ್ಲಿ ಮೂರು ಬೃಹದ್ ಗ್ರಂಥಗಳಾಗಿ ಪ್ರಕಟಿತವಾದ ವೈದಿಕ ಪಾಠಾಂತರಗಳು ಎಂಬುದೂ ಈತನ ಬಹುಮುಖ ಪಾಂಡಿತ್ಯ ಮತ್ತು ಪ್ರತಿಭೆಗಳ ದ್ಯೋತಕಗಳು. ಪುಣೆಯ ಭಾಂಡಾರ್‍ಕರ್ ಸಂಶೋಧನ ಸಂಸ್ಥೆಯವರು ಕೈಗೊಂಡ ಮಹಾಭಾರತದ ಸಂಸ್ಕರಣ ಮಂಡಲಿಯ ವಿದ್ವತ್-ಸದಸ್ಯರಲ್ಲಿ ಒಬ್ಬರಾದ ಈತನ ಮಹಾಭಾರತದ ಸಭಾಪರ್ವವನ್ನು ಸಂಪಾದಿಸಿದ್ದಾನೆ. ಅಮೆರಿಕದ ಪ್ರಸಿದ್ಧ ವಿದ್ವತ್‍ಪತ್ರಿಕೆಯಾದ ಜರ್ನಲ್ ಆಫ್ ದಿ ಅಮೆರಿಕನ್ ಓರಿಯೆಂಟಲ್ ಸೊಸೈಟಿ ಎಂಬುದರ ಸಂಪಾದಕನಾಗಿ, ಬ್ರಿಟನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿ, ಪುಣೆಯ ಭಾಂಡಾರ್‍ಕರ್ ಓರಿಯೆಂಟಲ್ ಸೊಸೈಟಿ ಮತ್ತು ಪಾಟ್ನದ ಬಿಹಾರ್ ರೀಸರ್ಚ್ ಸೊಸೈಟಿ, ಅಮೆರಿಕನ್ ಫಿಲಸಾಫಿಕಲ್ ಸೊಸೈಟಿ ಮತ್ತು ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಮುಂತಾದ ನಾನಾ ಪಂಡಿತ ಮಂಡಲಿಗಳಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿರುವ ಈತ ಭಾಷಾಶಾಸ್ತ್ರ, ಭಾರತೀಯ ತತ್ತ್ವಶಾಸ್ತ್ರ, ಧರ್ಮಶಾಸ್ತ್ರ ಮತ್ತು ಸಂಸ್ಕøತಶಾಸ್ತ್ರ-ಇವನ್ನು ಕುರಿತು ಅನೇಕ ವಿದ್ವತ್ ಪ್ರಬಂಧಗಳನ್ನು ಬರೆದಿದ್ದಾನೆ.

	ಅಮೆರಿಕದ, ಅಷ್ಟೇಕೆ ವಿಶ್ವದ, ಪ್ರಸಿದ್ಧ ಸಂಸ್ಕøತಜ್ಞನೂ ತನ್ನ ಬದುಕಿನ ವಾತಾವರಣವನ್ನೇ ಸಂಸ್ಕøತಮಯವನ್ನಾಗಿ ಮಾಡಿಕೊಂಡು ತನ್ನ ಕಾರಿಗೂ ಪ್ರಿಯಂವದಾ ಎಂಬ ಹೆಸರಿಡುವಷ್ಟರ ಮಟ್ಟಿಗೆ ಸಂಸ್ಕøತ ಪ್ರೇಮಿಯೂ ಆದ ಈತ ಹೊಸ ಪೀಳಿಗೆಯ ತರುಣ ವಿದ್ವಾಂಸರಿಗೆ ಮಾದರಿಯಾಗಿದ್ದಾನೆ.		 						
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ